ಯೇಲೇಶ್ವರಮ್
 	ಭಾರತದ ಪ್ರಾಗೈತಿಹಾಸಿಕ ನೆಲೆಗಳ ಪೈಕಿ ಒಂದು. ಆಂಧ್ರಪ್ರದೇಶದ ನೆಲ್ಗೊಂಡ ಜಿಲ್ಲೆಯಲ್ಲಿ ಕೃಷ್ಣಾನದಿಯ ಎಡದಂಡೆಯ ಮೇಲಿದ್ದ ಈ ಗ್ರಾಮದ ಬಳಿಯಲ್ಲಿ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಯೇಲೇಶ್ವರಮ್ ಕಣಿವೆಯಲ್ಲಿ ಪೂರ್ವ, ಮಧ್ಯೆ, ಮತ್ತು ಸೂಕ್ಷ್ಮ ಶಿಲಾಯುಗಗಳ ಕುರುಹುಗಳೂ ಅಲ್ಲಿಯ ದೇವಸ್ಥಾನದ ಬಳಿಯಲ್ಲಿ ನಡೆಸಿರುವ ಉತ್ಖನನದಲ್ಲಿ ಬೃಹತ್ ಶಿಲಾ ಸಮಾಧಿಗಳ ಕಾಲದಿಂದ ಹಿಡಿದು ಇತ್ತೀಚಿನವರೆಗಿನ ಸಾಂಸ್ಕøತಿಕ ಸ್ತರಗಳೂ ಕಂಡು ಬಂದಿರುವುದರಿಂದ ಜನವಸತಿ ಈ ಪ್ರಾಂತ್ಯದಲ್ಲಿ ಸುಮಾರು 400,000 ವರ್ಷಗಳಿಂದಲೂ ಅವಿಚ್ಛಿನ್ನವಾಗಿ ಇತ್ತೆಂದು ಹೇಳಬಹುದಾಗಿದೆ. ಇಲ್ಲಿ ಕಂಡುಬಂದಿರುವ ಅವಶೇಷಗಳಲ್ಲಿ ಸಾತವಾಹನ ಮತ್ತು ಇಕ್ಷ್ವಾಕು ಅರಸರ ಕಾಲದ ದೇವಾಲಯಗಳು ಇತರ ಕಟ್ಟಡಗಳು, ಆ ಕಾಲದ ಮತ್ತು ಅನಂತರದ ಹಲವಾರು ಶಿಲ್ಪಗಳು, ಶಾಸನಗಳು, ನಾಣ್ಯಗಳು ಮುಖ್ಯವಾದವು. ಈಗ ಯೇಲೇಶ್ವರಮ್ ಪ್ರದೇಶ ನಾಗಾರ್ಜುನಸಾಗರ ಅಣೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.										
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ